 ಜೀನ್ 2 

	ಟ್ವಿಲ್ ಬಟ್ಟೆಯ ಒಂದು ಬಗೆ. ಜೀನ್ಸ್, ಜೀನೆಟ್ಸ್, ತಿರುವಿ ಹಾಕಿದ ಜೀನೆಟ್ಸ್ ಮತ್ತು ಹತ್ತಿಯ ಕಾಶ್ಮೀರಾ ಇವೆಲ್ಲವನ್ನೂ 2 ಮತ್ತು 1ರ ಮೂಲೆ ನೇಯ್ಗೆಯಿಂದಲೇ (2/1 ಟ್ವಿಲ್) ನೇಯುತ್ತಾರೆ. ಇವೆಲ್ಲಕ್ಕೂ ಹೆಚ್ಚು ಕಡಿಮೆ ಒಂದೇ ಹೋಲಿಕೆಯುಂಟು. ಆದರೆ ಜೀನ್ ಇವೆಲ್ಲಕ್ಕಿಂತ ಅತ್ಯಂತ ತೂಕವಾದ ಬಟ್ಟೆ. ಇದನ್ನು ಹಾಸು ಅಥವಾ ಹೊಕ್ಕಿನ 2/1 ಮೂಲೆ ನೇಯ್ಗೆಯಿಂದ ವಿವಿಧ ಗುಣ ಮತ್ತು ಶೈಲಿಗಳಲ್ಲಿ ನೇಯುತ್ತಾರೆ. ಗಟ್ಟಿ ದಾರಗಳನ್ನು ಉಪಯೋಗಿಸಿದ ಹಾಸಿನ ಮೇಲ್ಮುಖವುಳ್ಳ ರಚನೆಯ ಬಟ್ಟೆ ಡ್ರಿಲ್ ಎನಿಸುತ್ತದೆ. ಇದನ್ನು ಮಕ್ಕಳ ಸಮವಸ್ತ್ರ, ಪಾದರಕ್ಷೆಗಳ ಒಳಪದರ ಮತ್ತು ಕಾರ್ಪೆಟ್ ಮುಂತಾದವುಗಳಿಗೆ ಉಪಯೋಗಿಸುತ್ತಾರೆ. ಇವಕ್ಕೆ 20ನೆಯ ಸಂಖ್ಯೆಯ ಹಾಸು ಹೊಕ್ಕುಗಳನ್ನು ಇಂಚು ಒಂದಕ್ಕೆ 90 ಹಾಸು ಮತ್ತು 60 ಹೊಕ್ಕುಗಳಂತೆ ಅಳವಡಿಸುತ್ತಾರೆ. ಹೊಕ್ಕಿನ ಮೇಲ್ಮುಖವಿರುವ ರಚನೆಯ ಬಟ್ಟೆ ಹಗುರವಾಗಿ ತಯಾರಿಸಲ್ಪಡುತ್ತದೆ. ಇದನ್ನು ಸಾಧಾರಣವಾಗಿ ಒಳಪದರಗಳಿಗೆ ಉಪಯೋಗಿಸುತ್ತಾರೆ. ಪ್ರತಿ ಇಂಚಿಗೆ 60 ಹಾಸು ಮತ್ತು 100 ಹೊಕ್ಕುಗಳನ್ನು ಅಳವಡಿಸಿ 14ನೆಯ ಸಂಖ್ಯೆಯ ಹಾಸು ಮತ್ತು 32ನೆಯ ಸಂಖ್ಯೆಯ ಹೊಕ್ಕನ್ನು ಉಪಯೋಗಿಸುತ್ತಾರೆ. 

	ಇನ್ನೊಂದು ಬಗೆಯ ಹತ್ತಿಯ ಜೀನ್ ಬಟ್ಟೆಯನ್ನು 5 ಬೆದಗಳ ಹೊಕ್ಕಿನ ಮೇಲ್ಮುಖದ ಮೂಲೆ ನೇಯ್ಗೆಯಲ್ಲಿ ತಯಾರಿಸಿ ಬಣ್ಣ ಇಲ್ಲವೇ ಚೆಲುವೆ ಮಾಡುತ್ತಾರೆ. ಇದರ ಉಪಯೋಗ ಸಾಧಾರಣವಾಗಿ ಉಡುಪಿನ ಒಳಪದರಗಳಿಗೆ. 42 ಪನ್ನವಿರುವ ಇಂಚಿಗೆ 52 ಹಾಸಿನ ಎಳೆಗಳು ಮತ್ತು 44 ಹೊಕ್ಕಿನ ಎಳೆಗಳನ್ನು ಉಪಯೋಗಿಸಿದ ಇದನ್ನು ಈಜಿಪ್ಟ್, ಪರ್ಷಿಯ ಮತ್ತು ಇತರ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತಾರೆ.									(ಕೆ.ಬಿ.ಸಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ